ಹಾಸನ : ಅರಸೀಕೆರೆ ಶಾಸಕ ಹಾಗೂ ಸಚಿವ ಕೆ. ಎಮ್. ಶಿವಲಿಂಗೇಗೌಡ ಅವರು ಸಾರ್ವಜನಿಕರ ಕುಂದುಕೊರತೆ ಆಲಿಸುವ ಸಂದರ್ಭದಲ್ಲಿ ಬಾಲಕಿಯೊಬ್ಬಳು ಕೇಳಿದ ಪ್ರಶ್ನೆಗೆ ಕೋಪಗೊಂಡು ಗರಂ ಆದ ಘಟನೆ ನಡೆದಿದೆ. ಗ್ರಾಮವೊಂದರಲ್ಲಿ ಮೂಲಸೌಕರ್ಯ ಹಾಗೂ ಇತರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಸಚಿವರ ಮುಂದೆ ಅಹವಾಲು ತೋಡಿಕೊಳ್ಳುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಬಾಲಕಿ, ತಮ್ಮ ಭಾಗದ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಾ ನಾವು ದಲಿತರು ಅಂತ ಹೀಗೆ ಮಾಡೋದಾ ಸರ್ ಎಂದು ನೇರವಾಗಿ ಪ್ರಶ್ನಿಸಿದ್ದಾಳೆ.
ಹಾಸನ ಜಿಲ್ಲೆಯ ಶಾಂತಿಗ್ರಾಮದ ಸರ್ಕಾರಿ ಹಾಸ್ಟೆಲ್‌ನಲ್ಲಿ ಅವ್ಯವಸ್ಥೆ ವರದಿ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದೆ. ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಹಾಸ್ಟೆಲ್‌ನ ಸರಿಯಾದ ವ್ಯವಸ್ಥೆ ಇಲ್ಲದೆ ಬಾಲಕಿಯರು ತಗಡಿನ ಶೆಡ್‌ನಲ್ಲಿ ವಾಸಿಸುತ್ತಿದ್ದ ಪರಿಸ್ಥಿತಿಯನ್ನು ಕಂಡು ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಲಕಿಯ ಈ ಮಾತಿನಿಂದ ತೀವ್ರ ಅಸಮಾಧಾನಗೊಂಡ ಸಚಿವರು ವೇದಿಕೆಯ ಮೇಲೆಯೇ ಆಕೆಯ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ತಮ್ಮ ಊರಿನ ರಸ್ತೆ, ನೀರು ಅಥವಾ ಇತರ ಮೂಲಸೌಕರ್ಯಗಳ ಕೊರತೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಬಾಲಕಿ, ತಾರತಮ್ಯ ಮಾಡಲಾಗುತ್ತಿದೆ ಎಂಬ ಅರ್ಥದಲ್ಲಿ ಸಚಿವರನ್ನು ಪ್ರಶ್ನೆ ಕೇಳಿದ್ದಾಳೆ. ಈ ಮಾತನ್ನು ಕೇಳುತ್ತಿದ್ದಂತೆ ಕೋಪಗೊಂಡ ಶಿವಲಿಂಗೇಗೌಡರು, ಅಭಿವೃದ್ಧಿ ಕೆಲಸಗಳಲ್ಲಿ ನಾವು ಯಾವುದೇ ಜಾತಿ ಭೇದ ಮಾಡುವುದಿಲ್ಲ ಎಂದು ಆಕೆಗೆ ತರಾಟೆಗೆ ತಗೆದುಕೊಂಡರು.
ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಇಂತಹ ಸೂಕ್ಷ್ಮ ಸಮಸ್ಯೆಗಳನ್ನು ತಕ್ಷಣವೇ ಪರಿಶೀಲಿಸಿ ಬಗೆಹರಿಸುವಂತೆ ಸಚಿವರು ಸೂಚನೆ ನೀಡಿದರು.
